ರಿಚರ್ಡ್.ಎಂ. ಡಾರ್ಸನ್ : -
-೧೯೮೧. ಅಮೆರಿಕದ ಜಾನಪದ ತಜ್ಞ. ಮೂಲತಃ ಇತಿಹಾಸ ಪದವೀಧರನಾದ ಈತ ಅಮೆರಿಕನ್ ನಾಗರಿಕತೆಯ ಇತಿಹಾಸ ಕುರಿತಾದ ಸಂಶೋಧನೆಗಾಗಿ ಪಿಎಚ್.ಡಿ. ಪದವಿ ಪಡೆದ. ಹಾರ್ವರ್ಡ್, ಮಿಶಿಗನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಇಂಡಿಯಾನ ವಿಶ್ವವಿದ್ಯಾಲಯಗಳಲ್ಲಿ ಇತಿಹಾಸ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ. ಅನಂತರ ಇತಿಹಾಸ ಕ್ಷೇತ್ರದ ಮೂಲಕ ಜಾನಪದ ಕ್ಷೇತ್ರಕ್ಕೆ ಪಾದಾರ್ಪಣ ಮಾಡಿದ. ಅಗ್ರಗಣ್ಯ ಜಾನಪದ ವಿದ್ವಾಂಸನೆಂದೇ ಪ್ರಸಿದ್ಧನಾದ.

ಮೂರು ದಶಕಗಳಿಗೂ ಹೆಚ್ಚು ಕಾಲ ಜಾನಪದ ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದ ಈತ ಇಂಡಿಯಾನ ವಿಶ್ವವಿದ್ಯಾಲ ಯದ ಜಾನಪದ ವಿಭಾಗದ ಮುಖ್ಯಸ್ಥನಾಗಿದ್ದ. ಜಾನಪದ ತನ್ನದೇ ಆದ ಅಧ್ಯಯನ ವಿಧಾನಗಳೊಂದಿಗೆ ಒಂದು ವೈಜ್ಞಾನಿಕ ಶಿಸ್ತಾಗಿ ಬೆಳೆಯುವುದಕ್ಕೆ ಅಗತ್ಯ ಕೆಲಸ ಮಾಡಿದ. ಅಲ್ಲದೆ ಮಾನವಿಕ ಕ್ಷೇತ್ರದ ವಿದ್ವಾಂಸರು ಮತ್ತು ತರುಣರನ್ನು ಈ ಕ್ಷೇತ್ರಕ್ಕೆ ಆಕರ್ಷಿಸಲು ಎಲ್ಲಕ್ಕಿಂತ ಹೆಚ್ಚಾಗಿ ಜಾನಪದ ಇತರ ಅಧ್ಯಯನ ಕ್ಷೇತ್ರಗಳಿಗೆ ಸರಿಮಿಗಿಲಾದ ಜ್ಞಾನಕ್ಷೇತ್ರ ಎಂಬುದನ್ನು ಮನವರಿಕೆ ಮಾಡಿಕೊಡಲು ಶ್ರಮಿಸಿದ.

ಸು. 23ಕ್ಕೂ ಹೆಚ್ಚು ಜಾನಪದ ಗ್ರಂಥಗಳ ಸಂಪಾದನೆ, ಪ್ರಪಂಚ ಜನಪದ ಕಥಾಸರಣಿಯಲ್ಲಿ 12ದೇಶಗಳ ಕಥಾಸಂಕಲನಗಳ ಪ್ರಧಾನ ಸಂಪಾದಕತ್ವ, 250ಕ್ಕೂ ಹೆಚ್ಚು ಸಂಶೋಧನಾತ್ಮಕ ಬರೆಹಗಳು ಈತ ಜಾನಪದ ಕ್ಷೇತ್ರಕ್ಕೆ ಸಮರ್ಪಿಸಿರುವ ಕೊಡುಗೆಗಳಾಗಿವೆ.

ಜಾನಪದ ಅಧ್ಯಯನ ಬಹುಮುಖವಾಗಿ ಬೆಳೆಯಲು ಕಾರಣರಾದವರ ಪೈಕಿ ಈತ ಪ್ರಮುಖ. ಈತ ಹುಟ್ಟುಹಾಕಿದ ಕೆಲವು ಪರಿಕಲ್ಪನೆಗಳು ಜಾನಪದ ಅಧ್ಯಯನಕ್ಕೆ ಹೊಸ ಆಯಾಮ ಒದಗಿಸಿದುವು. ಈ ಪೈಕಿ ಗಮನಾರ್ಹವಾದದ್ದು ಖೋಟಾ ಜಾನಪದ ಹಾಗೂ ಜಾನಪದ ಮತ್ತು ಜನಪದ ಜೀವನ ಪರಿಕಲ್ಪನೆಗಳು.

ಪ್ರಪಂಚದ ಬಹುತೇಕ ಎಲ್ಲ ದೇಶಗಳ ಜಾನಪದದ ಬಗೆಗೆ ಈತನಿಗೆ ಮಾಹಿತಿ ಇತ್ತು. ಅಮೆರಿಕ ನಗರ ಜಾನಪದ ಹಾಗೂ ಆಫ್ರಿಕ ಬುಡಕಟ್ಟು ಜಾನಪದಗಳೆರಡನ್ನೂ ಈತ ಸರಿಯಾದ ನೆಲೆಯಲ್ಲಿ ಅಭ್ಯಸಿಸಿದ ವಿದ್ವಾಂಸನಾಗಿದ್ದ. ವ್ಯಾಪಕ ಕ್ಷೇತ್ರಪ್ರವಾಸ, ಅಧ್ಯಯನ ಹಾಗೂ ಕ್ಷೇತ್ರ ಮಾಹಿತಿ ಆಧಾರದ ಮೇಲೆ ಈತ ಮಂಡಿಸಿದ ವಿಚಾರಗಳು ಜಾನಪದಾಸಕ್ತರಿಗೆ ಉಪಯುಕ್ತವಾಗಿದ್ದು ಜಾನಪದ ಅಧ್ಯಯನದಲ್ಲಿ ತಾಳಬೇಕಾದ ನಿಲುವುಗಳ ಬಗೆಗೆ ಅನುಸರಿಸಬೇಕಾದ ವಿಧಿವಿಧಾನಗಳ ಬಗೆಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ.

ಈತ ಒಬ್ಬ ಇತಿಹಾಸ ವಿದ್ವಾಂಸನಾಗಿದ್ದುದರಿಂದ ಶಿಷ್ಟ ಇತಿಹಾಸ ಹಾಗೂ ಮೌಖಿಕ ಪರಂಪರೆಯ ಇತಿಹಾಸ ಸಂಬಂಧ ಕೊಳುಕೊಡುಗೆಗಳ ಅಧ್ಯಯನ ಇವನನ್ನು ಹೆಚ್ಚು ಆಕರ್ಷಿಸಿತು. ಈತ ನಡೆಸಿದ ಆಫ್ರಿಕ, ಅಮೆರಿಕ ಜಾನಪದ ಅಧ್ಯಯನಗಳಲ್ಲಿ ಈ ಧೋರಣೆಯನ್ನು ಗುರುತಿಸಬಹುದು.

ಜಾನಪದ ಕುರಿತು ಪ್ರಚಲಿತವಿರುವ ವಿವಿಧ ಸಿದ್ಧಾಂತಗಳ ಬಗೆಗೆ ಪೂರ್ಣ ಪರಿಜ್ಞಾನವಿದ್ದ ಈತನಿಗೆ ಚಾರಿತ್ರಿಕ ಭೌಗೋಳಿಕ ಸಿದ್ಧಾಂತ ಬಲು ಪ್ರಿಯವಾಗಿತ್ತಲ್ಲದೆ ಗೋಲಾರ್ಧ ಸಿದ್ಧಾಂತವನ್ನೂ ಪ್ರತಿಪಾದಿಸಿ ದ್ದಾನೆ. ಅಮೆರಿಕ ಇತಿಹಾಸವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮಂಡನೆಗೊಂಡ ಈ ಸಿದ್ಧಾಂತ ಹಳೆ ಮತ್ತು ಹೊಸ ಪ್ರಪಂಚಗಳ ಜಾನಪದವನ್ನು ಬೇರ್ಪಡಿಸಿ ನೋಡುತ್ತದೆ.
ಈತನ ಕಾರ್ಯಚಟುವಟಿಕೆಯ ಸಾಮಥ್ರ್ಯ ಇವನಿಗೆ ವಿವಿಧ ಗೌರವಗಳನ್ನು ದೊರಕಿಸಿಕೊಟ್ಟಿತು. ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಸ್ಟಿಥ್ ತಾಂಸನ್ ನಿವೃತ್ತಿಯ ಅನಂತರ ಅಲ್ಲಿಯ ಜಾನಪದ ಸಂಸ್ಥೆಯ ನಿರ್ದೇಶಕನಾಗಿದ್ದ. ಬಹಳ ಕಾಲ ಈತ ಅಮೆರಿಕನ್ ಜಾನಪದ ಸಂಸ್ಥೆಯ ಅಧ್ಯಕ್ಷನಾಗಿದ್ದ. ಜನಾಂಗಿಕಶಾಸ್ತ್ರ ಮತ್ತು ಜಾನಪದ ಅಂತಾರಾಷ್ಟ್ರೀಯ ಸಂಸ್ಥೆಯ ಉಪಾಧ್ಯಕ್ಷನೂ ಸೊಸೈಟಿ ಫಾರ್ ಅಮೆರಿಕನ್ ಫೋಕ್‍ಲೋರ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನೂ ಆಗಿದ್ದ. ಪ್ರತಿಷ್ಠಿತ ಗಗನ್ ಹಿವ್ ಪ್ರಶಸ್ತಿಯನ್ನು ಮೂರು ಬಾರಿ ಗಳಿಸಿದ್ದ. ತನಗೆ ದೊರೆತ ಹುದ್ದೆ ಗೌರವಗಳನ್ನು ಈತ ಉದ್ದಕ್ಕೂ ಜಾನಪದ ಅಧ್ಯಯನದ ಶ್ರೇಯಸ್ಸಿಗಾಗಿ ಸಮರ್ಥವಾಗಿ ಬಳಸಿಕೊಂಡಿದ್ದ.

ಜಾನಪದ ಪರಿಕಲ್ಪನೆ, ಅಧ್ಯಯನ ವಿಧಾನಗಳು, ಅಂತರ್‍ಶಿಸ್ತೀಯ ಅಧ್ಯಯನದ ಅಗತ್ಯ, ನಗರ ಜಾನಪದ ಇವೇ ಮುಂತಾದ ಮೂಲಭೂತ ವಿಷಯಗಳಿಗೆ ಸಂಬಂಧಿಸಿದಂತೆ ಈತ ವ್ಯಕ್ತಪಡಿಸಿರುವ ಅಭಿಪ್ರಾಯ ಅನನ್ಯವಾದವು. ಈತನ ಹಾಗೆ ಜಾನಪದಕ್ಕಾಗಿ ದುಡಿದ ಮತ್ತೊಬ್ಬ ವ್ಯಕ್ತಿ ಜಾನಪದ ಅಧ್ಯಯನ ಚರಿತ್ರೆಯಲ್ಲಿ ಸಿಗುವುದಿಲ್ಲ.

ಅಮೆರಿಕನ್ ಫೋಕ್‍ಲೋರ್, ಆಫ್ರಿಕನ್ ಫೋಕ್‍ಲೋರ್, ದಿ ಬ್ರಿಟಿಷ್ ಫೋಕ್‍ಲೋರಿಸ್ಟ್ಸ್ - ಎಹಿಸ್ಟರಿ, ಫೋಕ್‍ಟೇಲ್ಸ್ ಟೋಲ್ಡ್ ಅರೌಂಡ್ ದಿ ವಲ್ರ್ಡ್, ಫೋಕ್‍ಲೋರ್ ಅಂಡ್ ಫೋಕ್‍ಲೈಫ್ : ಆ್ಯನ್ ಇಂಟ್ರಡಕ್ಷನ್, ಫೋಕ್‍ಲೋರ್ : ಸೆಲೆಕ್ಟೆಡ್ ಎಸ್ಸೇಸ್, ಫೋಕ್‍ಲೋರ್ ಇನ್ ದ ಮಾಡರ್ನ್ ವಲ್ರ್ಡ್-ಇವು ಈತನ ಪ್ರಸಿದ್ಧ ಕೃತಿಗಳು. ಈತ 1981 ಸೆಪ್ಟೆಂಬರ್ 11ರಂದು ನಿಧನನಾದ.    
(ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ